ಆಚರಣೆಯ ವಚನ
ವೀರಶೈವ ಮತ ತತ್ತ್ವಗಳನ್ನು ನಿರೂಪಿಸುವ ಗ್ರಂಥ. ಕರ್ತೃ ಸಂಪಾದನೆಯ ಚನ್ನಂಜೇದೇವರು (1530). ಈತ ತೋಂಟದ ಸಿದ್ಧಲಿಂಗೇಶ್ವರನ ಶಿಷ್ಯಪರಂಪರೆಗೆ ಸೇರಿದವ. ಷಟ್‍ಸ್ಥಲ ಚಕ್ರವರ್ತಿ ಎಂಬ ಬಿರುದಿದೆ. ಸಂಬಂಧರ ವಚನ, ಮಿಶ್ರಸ್ತೋತ್ರದ ವಚನ, ಬಸವ ಸ್ತೋತ್ರವಚನ ಎಂಬ ಇತರ ಗ್ರಂಥಗಳನ್ನೂ ಬರೆದಿದ್ದಾನೆ. ಆಚರಣೆಯ ವಚನಗಳ ಸಂಖ್ಯೆ 140. ಇದರಲ್ಲಿ ಇಷ್ಟಲಿಂಗಪೂಜೆ ಕ್ರಿಯಾಪ್ರಧಾನವಾಗಿಯೂ ಪ್ರಾಣಲಿಂಗಪೂಜೆ ಯೋಗಪ್ರಧಾನವಾಗಿಯೂ ಭಾವಲಿಂಗಪೂಜೆ ಧ್ಯಾನಪ್ರಧಾನವಾಗಿಯೂ ಇರುವುದೆಂದು ನಿರೂಪಿತವಾಗಿದೆ. ಇಷ್ಟಲಿಂಗದ ಒಳಭಾಗದಲ್ಲಿ ಪೀಠ ಮತ್ತು ಬಾಣವಿದ್ದು ಮೇಲುಭಾಗದಲ್ಲಿ ಧ್ಯಾನಕ್ಕೆ ಅನುಕೂಲವಾಗುವಂತೆ ಚಿದ್ರಸ (ಕಂತೆ) ಲೇಪನ ಮಾಡಿರುತ್ತಾರೆ. ಪೂಜೆ ಮಾಡುವವನ ಬಿಂಬ ಲಿಂಗದಲ್ಲಿ ಪ್ರತಿಬಿಂಬಿಸಿ, ಶಿವನಲ್ಲಿ ತಾನು ತನ್ನಲ್ಲಿ ಶಿವನಾಗಿ ಶಿವೋಹಂ ಭಾವ ವರ್ಧಿಸುತ್ತದೆ.										   
(ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ